Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದೀಪಾವಳಿ

ಕಳೆದ ವರ್ಷ
ಪಟಾಕಿ ಹೊಡೆದು
ಕಣ್ಣು ಕಳಕೊಂಡಿದ್ದ
ಬಾಲಕನ ಮನೆಯಲ್ಲಿ
ಈ ವರ್ಷ...
ದೀಪ ಉರಿಯುತ್ತಿತ್ತು...
ಬೆಳಕಿರಲಿಲ್ಲ!!

- ಶ್ರೀಗೋ.

24 Oct 2014, 05:31 am

ಸ್ನೇಹದ ಸವಿ ಜೇನು !

ಮನದ ಹರುಷಕೆ ಹೊಸ ರಾಗ ಹೊಸೆದೆ
ಮನಸನಿಟ್ಟು ಕನಸ ಕಟ್ಟಿದೆ
ಮುಂಗುರುಳಲ್ಲಿ ಮೋಹ ತುಂಬಿ ನಕ್ಕೆ
ಮಾಡಿಕೊಳ್ಳಲಿಲ್ಲ ಸ್ನೇಹಕ್ಕೆ ಕೊಂಚವೂ ಧಕ್ಕೆ
ಮಮತೆಯ ನಲ್ನುಡಿಯೇ ನಿನ್ನಾಭರಣ
ಮಾತೆಯ ಮಡಿಲಂತೆ ನಿನ್ನಂತಕರಣ
ಮಡಿಲಲ್ಲಿ ಮುದುಡುವ ಮಗುವಿನಾ ಪರಿ
ಅಪ್ಪುಗೆಯಲ್ಲಿ ಗೆಳೆತನದ ತಿಳಿ ನೀರ ಝರಿ
ಮುದ್ದಿಸಿ ಹಣೆಗೆ ಮುತ್ತಿಟ್ಟ ಗಳಿಗೆ
ನೀ ನೆನೆದಿದ್ದೆ ನನ್ನ ಸ್ನೇಹ ಜಡಿ ಮಳೆಗೆ
ಗೆಳೆತನದ ಮಳೆಗಾಲ ಮುಗಿಯಲೇ ಬೇಕು
ಅಗಲುವಿಕೆಯ ಬಿರು ಬೇಸಗೆ ಸಹಿಸಲೇ ಬೇಕು
ಅಕ್ಕರೆಯ ಸವಿ ನೆನಪು ಮೆಲುಕುತ್ತಿರೋಣ
ಆತ್ಮೀಯ ಆರ್ಧತೆ ಸಲಹುತ್ತಿರೋಣ

- ಶ್ರೀಗೋ.

21 Oct 2014, 12:08 pm

ಮನದನ್ನೆ !

ಮನದಾಳ ಮನದನ್ನೆ
ಮನದಲ್ಲಿ ನಿನ್ನನ್ನೇ
ನೆನೆ ನೆನೆದು ಮನವಿಲ್ಲಿ !
ಮರವಾಗೆ ಫಲವೆಲ್ಲಿ ?
ಹಸಿರಾದ ಮನವೆಲ್ಲಿ ?
ಉಸಿರಾದ ನೀನೆಲ್ಲಿ ?
ಕೆಸರಾದ ಜಗದಲ್ಲಿ
ಕೊಸರಾಡೆ ಕಮಲಕ್ಕೆ
ನಿಡಿದಾದ ಉಸಿರಲ್ಲೆ
ಬಡವಾದೆ ನಾನಿಲ್ಲಿ !
ನೀನೆಲ್ಲಿ ? ನೀನೆಲ್ಲಿ ?

- ಶ್ರೀಗೋ.

21 Oct 2014, 12:07 pm

ಮೂಖ ಮನಸ್ಸಿನ ಮರ್ಮರ

ಮನದ ಮರಳುಗಾಡಲ್ಲಿ
ಅಳಿದುಳಿದ ಸ್ನೇಹದ ಪಳೆಯುಳಿಕೆ
ಜೀವದುಸುರಿಗೆ ಅದುವೇ ಅರಿವಳಿಕೆ
ನಳನಳಿಸಿದ ಹೂಮರವೇಕೋ
ಅಲುಗಾಡಿಸಿ ಬೀಳಿಸಿತು ಪಕ್ಷಿಯ ಗೂಡ
ಸ್ನೇಹಕೂ ಇಲ್ಲದಾಯ್ತೇ ಬೇಡಿಕೆ ನೋಡ.
ಅಜರಾಮರ ಗೆಳೆತನವೆಂದುಕೊಂಡದ್ದು
ಅರೆಘಳಿಗೆಗೇ ಕರಗುವ ದುರಂತ
ಹೃದಯದೊಳಗೆ ಪ್ರಚಂಡ ಚಂಡಮಾರುತ
ಅನ್ಯರ ನುಡಿಗೆ ದಿಕ್ಕೆಟ್ಟು
ಹೊರ ನಡೆದಳಾಕೆ ಪಾದ ಹೊರಗಿಟ್ಟು.

- ಶ್ರೀಗೋ.

21 Oct 2014, 12:04 pm

ಕಾನನ ಸುಮ

ಅರಳಿದೆನೊಂದು ಹೂವಾಗಿ
ಪಡೆದೆ ಚೆಲುವ ಬಲು ಹಿತವಾಗಿ
ಒಲಿದವರಿಲ್ಲ ಯಾರೂ..
ಏಕೆಂದರೆ ನಾನಿರುವೆ ಕಾನನದ ಸುಮವಾಗಿ !

ನೋಡುಗರ ಬೆರಗುಗಳಿಲ್ಲ
ಮಿಟುಕಿಸುವ ಕಣ್ಣುಗಳಿಲ್ಲ
ಹೃದಯ ಕದಿವ ಕಳ್ಳರಿಲ್ಲ
ಕದಿಯಲೆನಗೆ ಹೃದಯಗಳಿಲ್ಲ..
ಏಕೆಂದರೆ ನಾನಿರುವೆ ಕಾನನದ ಸುಮವಾಗಿ !

ಬಣ್ಣವಿಲ್ಲ ಬೆಳಕಿಗೆ
ಸೂರ್ಯನಿಲ್ಲ ಬಿಸಿಲಿಗೆ
ಹಾವು ಚೇಳುಗಳ ಸಂತೆಯೊಳಗೆ
ಕಾದಿರುವೆ ತುಮುಲದಲ್ಲಿ
ಬರಬಹುದೇನೋ ಬದುಕು ಬಯಲಿಗೆಂದು
ಏಕೆಂದರೆ ನಾನಿರುವೆ ಕಾನನದ ಸುಮವಾಗಿ !

- ಶ್ರೀಗೋ.

19 Oct 2014, 08:22 am

ಮಹಾನಗರದ ಮರಗಳು ನಾವು

ಮಹಾನಗರದ ಮರಗಳು ನಾವು
ಮೈ ಹರವಿ ನೆರಳಾಗುವೆವು
ಮುಗ್ಗರಿಸಿ ಬೀಳುವೆವು ಒಮ್ಮೊಮ್ಮೆ
ಗಾಳಿ ಮಳೆಗೆ
ಆವ ಜನ್ಮದ ಪಾಪ
ತಟ್ಟಿಹುದೋ ಎಮಗೆ ?

ಎಲ್ಲರೂ ವೈರಿಗಳು
ಈ ಮಹಾನಗರದೊಳಗೆ
ವಸಂತಕ್ಕೆ ಮೈದಳೆದರೆ...
ಕೊಂಚ ಮೈ ಕೊಡವಿ ಚಿಗಿತರೆ
ಕೆ.ಇ.ಬಿ.ಯವರ ಕಟಾವು
ಕಿಂಚಿತ್ ಒಣಗಿದರೆ ಕೊಂಬೆ
ಪಾಲಿಕೆಯವರ ಕೊಡಲಿ
ನಾ ಹೇಗೆ ನೆರಳ ಕೊಡಲಿ ?

ರಸ್ತೆ ಅಗಲೀಕರಣ,
ಫುಟ್ಪಾತ್ ನವೀಕರಣ
ಏನಿಲ್ಲದಿದ್ದರೂ ಯೋಧರ ವನ
ಎಲ್ಲದಕ್ಕೂ ಪ್ರತಿನಿತ್ಯ ನಮ್ಮ ಹನನ

ಕತ್ತರಿಸಿದರೂ ರೆಂಬೆ ಕೊಂಬೆಗಳ
ಮತ್ತೆ ಚಿಗಿತು ಜೀವನದಲಿ
ಹೋರಾಡೆಂಬ ಪಾಠ ಸಾರುವೆವು
ಬಿಸಿಲಿಗೆ ಬೇಯುವ ಜನಕೆ
ಬಿಡದೆ ನೆರಳಾಗುವೆವು.

- ಶ್ರೀಗೋ.

15 Oct 2014, 11:21 am

ಓ ಕವಿಯೆ

ನಿನ್ನ ಲೇಖನಿಗೆ ತುಂಬಿ
ಬಣ್ಣ ಬಣ್ಣದ ಶಾಯಿ
ಬರೆಯದಿರು ಆತ್ಮವಿಲ್ಲದ
ನೂರಾರು ವ್ಯರ್ಥ ಕವಿತೆ!
ಇರಲಿ ಕಿಂಚಿತ್ತಾದರೂ
ರಕ್ತ ಚೀತ್ಕಾರದ ಚರಿತೆ,
ಅಲ್ಲದಿದ್ದರೂ ಹರಿಯಲಿ
ಬಡವನ ಬೆವರ ಹನಿಯ ಕಿರು ಒರತೆ !

- ಶ್ರೀಗೋ.

11 Oct 2014, 09:38 am

ಜೀವನ

ಹೊಸ ಬಟ್ಟೆ ಹಿಡಿದು
"ತಗೊಳ್ಳಿ ಸಾರ್, ತುಂಬಾ ಕಮ್ಮೀ ಬೆಲೆ"
ಎಂದು ಮಾರುತ್ತಾ ಬಂದವನ ಬಟ್ಟೆ
ಬಹಳ ಹಳೆಯದಾಗಿತ್ತು !

- ಶ್ರೀಗೋ.

11 Oct 2014, 07:06 am

ಕಮರು

ಹೇಗೋ ಹುಟ್ಟಿದ ಸ್ನೇಹವ ನೀನೇ
ಚಿವುಟಿದೆ ನಿನ್ನಯ ಉಗುರಿನಲಿ
ಸ್ನೇಹ ಒಂದೇ, ಮೋಹದ ಮುಂದೆ
ಉಳಿವುದು ಎಂದೇ ನಾ ಬೆಂದೆ.
ಯಾರದೋ ಶಾಪ, ಯಾರದೊ ಕೊಪ
ನೊಂದಿತು ಗೆಳತಿ ಈ ಮನಸು
ನಿನ್ನಯ ನಗುವೇ ನನ್ನಯ ಸ್ಫೂರ್ತಿಯು
ನೀ ನಗುತಿದ್ದರೆ ಅದು ಸೊಗಸು
ಏತಕೆ ವಾದ, ಬೇಡದ ಬೇಧ
ಮುಸುಕದೆ ಇರಲಿ ಕಾರ್ಮೋಡ
ಒಲುಮೆಯ ದುಡುಕು, ಬೇಡದ ಬಿರುಕು,
ಹಸನಾಗಿರಲಿ ನಿನ್ನ ಬದುಕು

- ಶ್ರೀಗೋ.

05 Oct 2014, 05:05 pm

ಅಣಕ

ಎತ್ತೆತ್ತ ನೋಡಲತ್ತತ್ತ ನಗುತಿದೆ
ಕ್ರೂರ ಮುಖ
ಕಂಗೆಡಿಸಿ ಮೇಲೆ ಬಿದ್ದಿದೆ ಹರಿ ಹಾಯ್ದು
ಚಾಚಿ ವ್ಯಾಘ್ರನಖ
ಬಾಚಿ ಬಿಗಿದಪ್ಪಿ ಉಸಿರುಗಟ್ಟಿಸಲೆತ್ನಿಸಿದೆ
ದೋಚಿ ಎಲ್ಲ ಸುಖ
ಸೋತು ಸೊರಗಿದರೂ ಮತ್ತೆ ಎಚ್ಚೆತ್ತು
ಹೋರಾಡುವ ವ್ಯರ್ಥ ಪ್ರಯತ್ನ
ಮಾಡಿ ಮಡಿವ ನನ್ನ ತುಸು ಯತ್ನ
ಗೆಲ್ಲಲಾರೆನೆಂದಿಗೂ ನಾ ಅರಿತೆ ವಿಧಿ ಬರಹ
ಮೆಟ್ಟಿ ನಿಲ್ಲಲಾರೆ ಮರೆತು ಕೂಡಾ
ಇದು ಜೀವನದ ನಿಜ ಅಣಕ.

- ಶ್ರೀಗೋ.

05 Oct 2014, 05:03 pm