ನೋಡಬ್ಯಾಡ ಹುಡಗಿ ಹಂಗ ನೀ ಭಾಳ ಚೆಂದ..
ಕಾಡಬ್ಯಾಡ ಸುಮ್ಮ್.. ನನ್ನ ಬುದ್ದಿ ಭಾಳ ಮಂದ
ನಕ್ಕು ನಕ್ಕು ಸೆಳಿತಿಯಲ್ಲೇ ನನ್ನ ದ್ಯಾಸ
ನೋಡಿ ನೋಡಿ ಎದಿಯಾಗ ಏನೋ ಒಂಥರದ ತ್ರಾಸ
ಹುಚ್ಚು ಮನಸ್ಸು ಹದಕ್ಕ ಬಂದದ
ನನ್ನ ರೇಷನ್ ಕಾರ್ಡಗೆ ನಿನ್ನ ಹೆಸರು ಕೇಳ್ತದ
ಬತ್ತಿದ ಕನಸು ಮತ್ತ ಎದ್ದ ಕುಂತಾವು
ಚೆಂದದ ಜೀವನಕ್ಕೆ ನೀನಾ ಬೇಕ ಅಂತಾವು
ಕೈ ಹಿಡಿ ಒಮ್ಮೆ ಹೆಂಗಾರ
ಕೂಡಿ ಹೊರುವಾ ಈ ಜೀವನದ ಭಾರ
ಪ್ರೀತಿಲಿ ನಡಸೋನು ಅಂದದ ಸಂಸಾರ..
ಮಳೆಯೇ ನಾನು ಸೇರಲೇ ನಿನ್ನೊಟ್ಟಿಗೆ
ನೀನಾದರು ಇರುವೆಯ ನನ್ನೊಂದಿಗೆ
ಜಗಕೆ ಕಾಣದ ನೋವ ನೀನಾದರೂ ಕಾಣುವೆಯ
ಈ ಮನುಜ ಕಾಣದ ಕಣ್ಣ ನೀರ ನೀನಾದರು ಒರೆಸುವೆಯ
ತೋರಲಾರೆನು ಕಣ್ಣೀರು ಜಗದೊಳು
ತಡೆದು ಇರಲಾರೆನು, ತೋರಿ ಸೋಲಲಾರೆನು
ಮನದೊಳಗಿನ ನೋವು ಕಾಡುತಿರಲು
ಕಣ್ಣಂಚಿನ ನೀರು ಜಾರಲು ಕಾಯುತಿರಲು
ಸೋಲಲಾರೆನು ಈ ಜಗದೊಳು
ಸೇರಿಸಿಕೊಳ್ಳುವೆಯ ನನ್ನ ಕಣ್ಣೀರ ನಿನ್ನ ಜೊತೆಯಲಿ
ನಿಂತಿರುವೆ ನಾನು ನಿನ್ನ ಪ್ರೀತಿಯ ಅಲೆಯಲಿ
ಜಾರಲು ಕಾಯುತಿಹ ಕಣ್ಣೀರ ತೊಳೆದು ನೀಡು ನೆಮ್ಮದಿಯನು
ಮಳೆಯೇ ನೀ ಸೇರಲು ಬರುವೆಯ ನನ್ನ ಕಣ್ಣ ಅಂಚಿನ ನೀರನು.
ಅರ್ಪಣೆ:
ನೋವು ಕಣ್ಣೀರನ್ನು ಮನಸೊಳಗೆ ಬಚ್ಚಿಟ್ಟು ಬದುಕುತಿರುವವರಿಗೆ