ಕವಣಿಗೆ ಕಲ್ಲಾದೆವು
ಬಿಲ್ಲಿಗೆ ಬಾಣವಾದೆವು
ತೋಪಿಗೆ ಸಿಡಿಗುಂಡಾದೆವು
ಬೆಂಕಿ ಕಡ್ಡಿಗೆ ಉರಿಮದ್ದಾದೆವು
ಗುಲಾಬಿ ಹೂ ಗಿಡಮರಕೆ ಮುಳ್ಳಾದೆವು
ನಿಮ್ಮ ಕಾಲಿಗೆ ಚಪ್ಪಲಿಯಾದೆವು
ಯಾಕೆಂದರೆ.....
ನಾವು ಮುಗ್ಧರು.... ಮುಗ್ಧರು....
ಓ..ಸೂರ್ಯ,
ನೀ ಬಂದು ನಮ್ಮ ಮನೆಯ ಒಲೆಯೊಳಗೆ ಕುಳಿತುಬಿಡು,
ನನ್ನ ಅವ್ವ ರೊಟ್ಟಿ ಬೇಯಿಸಿ ಬಿಡುವಳು ನಿನ್ನ ನೆತ್ತಿಯ ಮೇಲಿಟ್ಟು.
ಓ..ಸೂರ್ಯ,
ನೀ ಬಂದು ಸ್ಮಶಾನದಲಿ ಚಿತೆಯಾಗು
ನಮ್ಮವರು ಹೆಣ ಸುಟ್ಟು ಬಿಡು
ಅವರ ಮೈಯೊಳಗಿನ ರಕ್ತಗಾಯ ಅಳಿಸಿಬಿಡು.
ಓ... ನನ್ನ ಜನಗಳೆ,
ಸತ್ತು ಸಮಾಧಿ ಸೇರಿದ ನಮ್ಮವರ ಹೆಣಗಳನು
ಕಿತ್ತು ಹೊರಗೆ ಎಸೆಯಿರಿ
ಹದ್ದು ಕಾಗೆಗಳು ಹಸಿದು ಕುಳಿತಿವೆ
ತಿಂದು ತೇಗಲಿ...
ಓ... ಚಂದ್ರ,
ನೀ ಬಂದು ನಮ್ಮ ಹರಕು ಮುರುಕು ಹಂಚಿನ ಗುಡಿಸಲು ಮೇಲೆ ಕುಳಿತುಬಿಡು
ನೀ... ತಂಪಿಗೆ ಹೆಸರಂತೆ...
ಕಣ್ಣು ಮುಚ್ಚಿ ಕಣಸು ಕಾಣುವೆ ನಾ,
ನನಗೆ ಉಳಿದಿರುವುದೊಂದೆ ನಾ ಬಡವ.....
ಇತಿಹಾಸದ ಬೆನ್ನೇರಿ ಅರಸುತ್ತಾ ಅಲೆದೆ,
ಒಂದಿಷ್ಟು ಸಿಗಲಿಲ್ಲ ಅವಶೇಷ...
ಅರಮನೆಗೆ:-
ಕಲ್ಲು ಹೊತ್ತು ನೆತ್ತಿ ನೆಗ್ಗಿಸಿಕೊಂಡವರ,
ಕಲ್ಲು ಕಟೆದವರ,ಗಾರೆ ಕಲಿಸಿದವರ,
ಗೋಡೆ ಕಟ್ಟಿದವರ, ಬೆನ್ನು ಬಾಗಿಸಿಕೊಂಡವರ...
ರಂಗು.. ರಂಗಿನ ಕಥೆಗಳು...
ಇತಿಹಾಸದ ಬೆನ್ನೇರಿ ಅರಸುತ್ತಾ ಅಲೆದರೆ,
ಒಂದಿಷ್ಟು ಸಿಗಲಿಲ್ಲ ಅವಶೇಷ...
ಯುದ್ಧದೊಳಗೆ:-
ಖಡ್ಗ ಝಳಪಿಳಿಸಿದವರ,
ಬಿಲ್ಲಿಗೆ ಬಾಣ ಹೂಡಿದವರ,
ಆನೆಗೆ ಅಂಕುಶ ಚುಚ್ಚಿದವರ,
ಕುದುರೆಗೆ ನಾಲು ಬಡೆದವರ,
ಖಡ್ಗಕ್ಕೆ ರುಂಡ ಕೊಟ್ಟವರ,
ನೆಲಕ್ಕೆ ರಕ್ತ ಕೋಡಿಯಾದವರ....
ರಂಗು ರಂಗಿನ ಕಥೆಗಳು...
ನೆನಪಾಗುತ್ತಿದೆ ಹಿಂದಿನ ಭಾರತ ಬದುಕು
ನಸು ಬೆಳಕಾಗಿದೆ ಇಂದಿನ ಜೀವನ ತುಣುಕು
ರಾಜ-ಸೇವಕ, ಗುರು-ಶಿಷ್ಯರ ಸ್ವಾಮಿ ಭಕ್ತಿ
ಆಜ್ಞಾ ಕಾರ್ಯದಿ ಚಿತ್ತ ಭಕ್ತಿಯ ಮುಕ್ತಿ
ಇದುವೆ ಆನಾದಿ ಕಾಲದ ಶೋಭಿತ ಸೂಕ್ತಿ
ಆದರೆ ಏನಾಗಿದೆ ಇವತ್ತು?
ನೋಡು ನೋಡುತಾ ಬರುವ ಕಾಲಗಳು
ಆಯಾತಪ್ಪಿ ಮುಕ್ಕುರುಸಿ ಬೀಳುತ್ತಿವೆ
ಕಾರಣ, ಮೋಸದ ಆಡಳಿತಸೂತ್ರ ಬಳಕೆಯ ಕಾರ್ಖಾನೆ
ಉಗುಳುತಿದೆ ತನ್ನೋಳಗಿನ ವಿಷದ್ವೇಷ
ಬಲಿಯಾದವರು ಅಮಾಯಕರು! ಬಳಿಯೇ ಯಮಪಾಶ
ಕೇಳೋರು ದಿಕ್ಕಿಲ್ಲ, ಬಂದರೋ ಅವರಿಗೆ ಬದುಕಿಲ್ಲ
ಅಧಿಪತಿಯೇ ಭ್ರಷ್ಟನಾದರೆ ಅಧಿಕಾರಿಗಳು ಅದೃಷ್ಟರು!
ಅಧರ್ಮ ಕಾಲ ಬರಬಹುದೇನೋ...?
ಮಾಯಾ ಜಾಲ ಬೀಸಿ ಉಕ್ಕಿಸುವುದು ಹಾಲಹಲ
ಬರಬಹುದು ವಿಷ್ಣುವಿನ ಹನ್ನೆರಡನೇ ಅವತಾರ
ಮೊದಮೊದಲು ಹೆದರಬಹುದು ನೋಡಿ ಇವರ ಗ್ರಹಚಾರ
ಜಾತಿ ಎಂಬ ಬಲೆ, ಮತವೆಂಬ ಸೆಲೆ, ಕೋಮುವಾದದ ಅಲೆ
ಕಂಡು! ಕಂಗಾಲಾದರೂ ಸಂಶಯವಿಲ್ಲ
ಗೋಮುಖ ಧರಿಸಿದ ವ್ಯಾಘ್ರಗಳೋ ಸುತ್ತಲಿನ ಜನರು
ಸಾಥ್ ನೀಡುವ ನಾಟಕವಾಡಿ ದೂರ ಓಡಿ ಸಂತಸ ಪಡುವವರು!
ಅಶಾಂತಿ, ಕೊಲೆ, ದರೋಡೆ ಎಂಬ ಭೂತ ಮೈಗೂಡಿಸುವವರು!
ಬಲಿಯಾದವರು ಪರಿಶುದ್ಧ ಧರ್ಮಾಂಧರು!
-ದೇವ ಕಜ್ಜೇರ