ಹೊಸ ದಿನಗಳ ಹೊತ್ತು ತರುತಿದೆ ಮತ್ತೊಮ್ಮೆ,
ಹಳೆ ದಿನಗಳ ದೂರ ಸರಿಸುತಲಿ ಮಗದೊಮ್ಮೆ..
ಹೊಸವರುಷ ತರುತಲಿದೆ ಹೊಸತನವ,
ಹೊಸಹುಮ್ಮಸ್ಸಿನಲಿ ತೇಲಿಸುತಿದೆ ಮೈಮನವ....
ಹಳೆ ವರುಷದ ಬೇರಿನಲಿ ಹೊಸವರುಷ ಚಿಗುರುತಿದೆ,
ಹಳೆ ಮನಸ ಮೂಲೆಯಲಿ ಹೊಸ ಕನಸ ಬಿತ್ತುತಿದೆ...
ಹಳೆ ದಿನಗಳ ವ್ಯವಕಲನ, ಹೊಸ ದಿನಗಳ ಸಂಕಲನ,
ಹೊಸವರುಷದಲಿ ಆಗುತಿದೆ ಅವೆರಡರ ಸಮ್ಮಿಲನ..
ಹಳೆನೋವ ಮರೆಯೋಣ, ಹೊಸ ಖುಷಿಯ ಸವಿಯೋಣ,
ಹೊಸ ವರುಷದಲಿ ಒಂದಾಗಿ ಹೊಸತನವ ಹಂಚೋಣ...
ದಿನ ಮುಳುಗಿದ್ದರು
ಇನ್ನೂ ರಾತ್ರಿ ಬರುತ್ತಿಲ್ಲ
ನೀ ದೂರವಿದ್ದರು
ನಿನ್ನ ನೆನಪು ಬೆನ್ನು ಬಿಡುತ್ತಿಲ್ಲ
ಆದರೂ ಅದೇಕೋ
ಮನದಂಗಳ ಇನ್ನೂ ಕತ್ತಲಲ್ಲಿದೆ
ಭಾವಗಳೆಲ್ಲ ಕುರುಡಾಗಿದ್ದರು
ಎದೆ ಸುಡುತಿದೆ ವಿರಹದ ಬೇಗೆಯಲಿ
ಭಾವನೆಗಳ ಜೊತೆ ಬೆರೆತಿರುವೆ ನೀನು
ನೀನೇನೆ ಹೇಳು ಜನ್ಮಪೂರ್ತಿ
ನಿನ್ನದೇ ನೆನಪಲ್ಲಿ ನರಳೋದೇ.
ನನ್ನ ಹಣೆಬರಹ....
ನಕ್ಷತ್ರಗಳು ರಾತ್ರಿಯಲ್ಲಿ
ಭೂಮಿಯ ಗಾಢ ನೀರವತೆಯ
ಅಗಾಧ ಚಟುವಟಿಕೆಗೆ
ಮೌನ ಸಾಕ್ಷಿ ಗಳಾಗಿ -ಅದರ
ಹುಮ್ಮಸ್ಸು-ರಭಸಗಳನ್ನು,
ಮೋಜು-ಮಿಲನಗಳನ್ನು,
ಕುತೂಹಲದಿಂದ ನೋಡುತ್ತಾ
ಕಣ್ಣ ಮಿಟುಕಿಸುತ್ತಾ,
ಲಕ್ಷ ಕೋಟಿಗಳಾಗಿ
ನೆರೆದು-ಮೈ
ಮರೆತು,ಮೇಳೈಸಿದೆ
ಗಗನಪರದೆಯ ಹಿಂದೆ.
ನಿತ್ಯ ರವಿ ಕಾಂತಿಯಂತೆ ಹೊಸ ಬೆಳಕು ಮೂಡಲಿ
ಹೊಸ ವರುಷದಂತೆ ,ಹೊಸ ಹರುಷದಂತೆ
ಪ್ರತಿನಿತ್ಯ.
ಆಗಿ ಹೋದವುಗಳು ಬೇಡ, ಆಗು ಹೋಗುಗಳು ಬೇಡ
ವರ್ತಮಾನವ ಕಳಿ ಹೊಸ ಹರುಷದಿ,
ಪ್ರತಿ ದಿನ ಹೊಸ ಉದಯವಾಗಲಿ,
ಕಲ್ಲು- ಮುಳ್ಳಿನ ಬಾಳೊಳಗೆ ,ನೆಮ್ಮದಿಯ ಹೂವೊಂದು ಸಾಕು,
ಜಗಕೆ ಪಸರಿಸು ನಿನ್ನಿಸುಗಂಧವ
ವ್ಯರ್ಥವಾಗುವ ಮೊದಲು,
ಪಾವನವಾಗುವುದು ನಮ್ಮೀ ಜೀವನ.
ಬೆಳಕ ನೀ ಬಯಸುವ ಮುನ್ನ
ಪ್ರಯತ್ನವ ನೀ ಗೆದ್ದಿರಬೇಕು.
ಹೊಸ ವರುಷ ಹೊಸ ಹರುಷ ಹೊಸ ಬೆಳಕು
ತಂದೀತು ಹೊಸ ಬಾಳು.