ಈವರೆಗೆ ಅಮಾಯಕನಾಗಿದ್ದ ನನ್ನನ್ನು ಛೇದಿಸಿ ಬಿಟ್ಟ ಅಮಾನುಷ ವಾರ್ತೆ ಅವಳೊಂದಿಗೆ ಕಳೆದೊದದ್ದು ಎಂದೇಳುವಾಗ ನನ್ನ ವಯಸ್ಸಿನ ಪರಿಧಿಯು ಒಂದು ಹೆಜ್ಜೆ ಮುಂದಿಡುತ್ತದೆ
ಲೆಕ್ಕ ತಪ್ಪಿದ ಅಲೆಗಳ ಎಣಿಕೆ ಶುರು ಮಾಡಿದ ತರುವಾಯ ಅವಳೊಂದು ಕಡಲು ನನ್ನೊಳಗೆ
ಯಥಾಪ್ರಕಾರ ಕನಸಿನ ರಂಗಿನಾಟಕ್ಕೆ ಮುಹೂರ್ತವಿಟ್ಟು ಗತಿಸಿದ ಒಲವನ್ನು ಜೀವಂತವಿರಿಸುವ ಹಟಗಾತಿ..
ಗಾಳಿಗೆ ಸೋತ ಮೋಡದ ಭುಜಬಲದಂತೆ ಅವಳು ಎದೆಯೂರಿನಲ್ಲಿ
ತಾಕಲಾಟಕ್ಕೆ ಎಡೆ ಮಾಡಿಕೊಡುವಾಗ ಇನ್ನೂ ವಿಚಲಿತಗೊಳಿಸುವ ಉಮೇದಿನವಳು
ಕನಸಿಗೆ ಸೋಲಬಾರದೆಂದರೆ ನಿದ್ರಾದೇವಿಯೂ ಮುನಿಸಿಕೊಂಡಿದ್ದಾಳೆ..
ಅವಳ ನೆನಪಗಳು ವಂಚಿಸಿದ ರಾತ್ರಿಗಳೆಲ್ಲವೂ ಕನಸಿಗೆ ರಜೆ ಕೊಡುತ್ತಿತ್ತು
ಹಾಸು ಬೆನ್ನಿಗೆ ಎದೆಗೀರಿನ ಚಿತ್ರಣ ಕೊಡದ ನನ್ನ ಅಲ್ಪಾಯುಷಿ ಬಯಕೆಯೊಂದು ಸೋಲಬಾರದೆಂಬ ನಿಲುವಿನಲ್ಲಿದೆ
ಮುಗಿಲೂರಿನವಳು ಇಷ್ಟಕ್ಕೆ ಒಲವಿನ ಮಗ್ಗುಲು ಬದಲಾಯಿಸುತ್ತಾಳೆ
ಅವಳ ಒಲವೆಂದರೆ ಮರೀಚಿಕೆಯನ್ನೋದು ಪ್ರತಿಬಾರಿ ಸೋಲುವವನಿಗೆ ತಿಳಿದ ವಿಚಾರವೇ ಆಗಿದೆ
ಇಂತಿಷ್ಟು ಕಾಲಾವಧಿಯ ಪ್ರಣಯ ವಿನಿಮಯಕ್ಕೆ ಒಲವೆಂದು ಹೆಸರಿಟ್ಟಿದ್ದಾಳೆ ಅವಳು..
ಮದರಂಗಿಯ ಚಿತ್ತಾರದಲ್ಲಿ
ಮುಂಗುರುಳನ್ನು ಮರೆಮಾಚಿದ
ತರುವಾಯ ಬಿಸಿಯುಸಿರ ಸೆಳೆದಿಟ್ಟ
ಅವಳ ಆಂತರ್ಯಕ್ಕೆ ಸೋಲಬೇಕಾದ
ನನ್ನ ಎದೆಯೊಳಗೊಂದು ಇಶ್ಕ್ ನ
ಮುನ್ನುಡಿ ಬರೆಯುತ್ತೇನೆ....
ಅವಳ ತಾರೀಪಿಗಾಗಿ ಎದೆಗೀರಿನ
ಚಿತ್ರವನ್ನು ಹುದುಗಿಸಿಡುವ ನನ್ನ
ಹುಂಬತನವು ಯಥಾಪ್ರಕಾರ
ನಡೆಯುತ್ತದೆ ಅವಳಂತೂ
ಕನಸುಗಳನ್ನು ಬಂಧಿಸಿಡುವ ನಿಪುಣೆ
ಎದೆಯೂರಿನವಳ ತಲಾಶೆ
ಮಾಡುವ ಅಲೆಮಾರಿ ನಾನು..!
ಬೆಳಕೊಂದು ಬರಬಾರದೇ
ಕತ್ತಲು ತುಂಬಿದ ಕಂಗಳಿಗೊಮ್ಮೆ
ನೇತ್ರದಾನದಿ ದೃಷ್ಟಿಮೂಡಿ
ಬೆರಗುಗಣ್ಣಲಿ ಜಗವ ಕಾಣುವಂತೆ
ನೀ ಸಿಗಬಾರದೇ ಹೇಳು
ಮನದುಗಿಬಂಡಿಯಲಿ ಕೊತಕೊತ ಕುದಿಯುವ ಭಾವನೆಗಳ ಚುಕುಬುಕುವನು
ನಿಲ್ಲಿಸುವ ನಿಲ್ದಾಣದಂತೆ
ಕನ್ನಡಿಯ ಗಂಟಿದು ಹೇಗೆ ತೆರೆಯಲಿ
ಬದುಕೊಂದು ಒಗಟು ಹೇಗೆಬಿಡಿಸಲಿ
ಈ ಕುರುಡು ಕಂಗಳಿಗೂ ನಗುವಾಸೆ ಒಮ್ಮೆ
ಎಲ್ಲಿ ಹುಡುಕಲಿ
ಕೊರಗದಿರು ಎಲೆಮನವೆ ಜಗವು ಕೊರತೆಗಳ ಮಹಾ ಸಂತೆ
ತಮ್ಮ ಮನದೂನವ ಕಾಣದಾ ಕುರುಡರು
ದುರ್ಬೀನಿನಲ್ಲಿ ಪರರ ಊನವನು
ಹುಡುಕುವರು
ಮೂರು ಗಂಟಿಗೆ ಬೇಕು ಪ್ರೀತಿಯಾನಂಟು
ಮುಖವಾಡಕೆ ಬೇಕು ಸೌಂದರ್ಯದಾ ಒಣ ಅಂಟು
ಮುಖವಾಡಕೆ ಮನಸೋಲುವವರು ಅವರಂತೆ
ಅಂತಹವರಿಗಾಗಿ ಕಣ್ಣೀರಿಡುವುದು ಸರಿಯುಂಟೇ?
ದಾರಿಕಾಣದಾಗಿರಲು ನೀ ನಿರ್ಮಿಸಿಕೋ ನಿನ್ನದೇ ದಾರಿಯ
ಅದೆಷ್ಟು ಜನ ಹಿಡಿದುಬರುತಿಹರು ನೋಡು ನಿನ್ನ ದಾರಿಯ
ನೀನೀಗ ಅವರೆಲ್ಲರಿಗೂ ಮಾದರಿ
ಆಗಸವ ಸ್ಪರ್ಶಿಸಲೆತ್ನಿಸುತಿಹರು ನಿನ್ನ ನಿರಾಕರಿಸಿದವರು ಇಂದು ಹಾರಿ ಹಾರಿ