ಬಣ್ಣಗಳು ಕರಗಿ ಮಬ್ಬಾದ
ಅವಳ ಚಿತ್ರವೊಂದು
ನೆನಪಿನ ಪುಟದೊಳಗಿಂದ
ನನ್ನನು ಕಾಡುತ್ತಿತ್ತು
ಮೊದಲ ನೋಟದಲ್ಲೇ
ಅಚ್ಚೊತ್ತಿದ ಚಿತ್ರದ
ಭಾವಗಳು ಅಯೋಮಯವಾಗಿ
ಅವಳ ನಗು ಅಸ್ಪಷ್ಟವಾಗಿತ್ತು
ನಿನ್ನ ದಟ್ಟ ಹೆರಳ ವರ್ಣದ
ವರ್ಣನೆ ನಾ ಮಾಡಲೇ?
ಬೆಂಡೋಲೆ ಕಳಿಸಿದ ಪ್ರೇಮದೋಲೆಯ
ನಿನ್ನ ಮುಂದೆಯೇ ಓದಲೇ?
ಬೊಗಸೆ ಕಣ್ಗಳ ಹಾದಿಯಿಂದ
ನಿನ್ನ ಕನಸ ಸೇರಲೇ?
ತುಟಿಯಂಚಲಿ ಬಂದ ನಗುವಿಗೆ
ಬಿದ್ದ ಕೆನ್ನೆ ಗುಳಿಯಲಿ ನಾ ಬೀಳಲೇ?
ವರ್ಣಹೀನ ಚಿತ್ತಾರದೊಂದಿಗೆ
ನನ್ನ ವರ್ಣರಂಜಿತ ಸಲ್ಲಾಪವು...
ನೋಡಿ ವರುಷಗಳು ಕಳೆದರೂ
ಮನದ ಪೇಚಾಟಕ್ಕೆ ಎಲ್ಲಿ ಕೊನೆ...
ಅವಳೊಮ್ಮೆ ಸಿಕ್ಕರೆ? ಒಮ್ಮೆ ನಕ್ಕರೆ?
ಮಾಸಿದ ಚಿತ್ರಕೆ
ರಂಗಿನೋಕುಳಿ ಚೆಲ್ಲಿ ಹೋದರೆ...!!
"ಫೇಸ್ ಬುಕ್ಕಿನಲ್ಲಿ ಅವಳಿರಬಹುದು
ಹುಡುಕಿ ನೋಡೊಮ್ಮೆ"
ನನ್ನ ಪಾಡಿಗೆ ಕೊರಗಿದ
ಗೆಳೆಯನ ಸಲಹೆ ಬಂತು.
ಕಣ್ಣಂಚಿಗೆ ಆಸೆಯ ನೀರನೆರಚಿ
ನಡೆಸಿದ ತಡರಾತ್ರಿಯ ತಡಕಾಟದಲ್ಲಿ
ಸಿಕ್ಕಿ ಬಿಟ್ಟಿತು ಅವಳ ಮುಖ!!
ಹುಡುಗನೊಬ್ಬನ ಕೆನ್ನೆಗೆ
ಗುಳಿಬಿದ್ದ ಕೆನ್ನೆ ಅಂಟಿಸಿ
ತನ್ನ ಕೈಯ್ಯಾರೆ ತಗೆದ ಚಿತ್ರಕೆ
"ನಾನೂ-ನನ್ನವನೂ" ಶೀರ್ಷಿಕೆ
ಜನುಮ ಜನುಮದ ದಾರಿಯಲ್ಲಿ
ಹಲವು ಕವಲುದಾರಿಯ ತಿರುವು
ಯಾವ ಮಣ್ಣಿನಲ್ಲಿ ಯಾರ ಋಣವು
ಸೇರಿದೆ ಮೂರುದಿನದ ಬದುಕಿನಲ್ಲಿ
ಬದುಕೆಂಬ ಆಟದಲಿ ಆಟಗಾರರು ನಾವು
ಬಿಚ್ಚಿಡದೆ ಮುಚ್ಚಿಟ್ಟ ಭಾವನೆಗಳು ಹಲವು
ಮನಸಲ್ಲಿ ಹೆಣೆದಿಟ್ಟ ಕನಸುಗಳು ನೂರು
ಒಂದೂ ಅರಳದೆ ಹೊಸಕಿಹೊಯಿತು
ಒಂದೊಂದಕ್ಕೂ ಒಂದೊಂದು ಕಥೆಯು
ನೋವು ಸಂತಸದ ಹಲವು ಮುಖವು
ಮನದ ಮಾತು ಮೌನಕ್ಕೆ ಶರಣಾಯ್ತು
ಕ್ಷಣ ಕ್ಷಣವೂ ಕುಗ್ಗುತಿದೆ ನಂಬಿಕೆ
ಹತಾಶೆ ಮೂಡುತಿದೆ ಹೃದಯದ ಮೂಲೆಯಲ್ಲಿ...!!!
ನಿನ್ನ ಕಣ್ಣಿನ ಸುರುಳಿಯಲ್ಲಿ ನನ್ನೇಕೆ ಸೆರೆ ಹಿಡಿದೆ?
ನಾನೇಕೆ ನಿನ್ನ ತೋಳ್ತೆಕ್ಕೆಯಲ್ಲಿ ಬಂಧಿಯಾದೆ?
ಬೆಳದಿಂಗಳ ಪ್ರೀತಿಯಲ್ಲಿ ನಾನೇಕೆ ಕರಗಿ ಹೋದೆ?
ನನ್ನ ಪ್ರಶ್ನೆಗಳ ಸರಪಳಿ ಬಿಡಿಸುವ ಮೊದಲು,
ನಿನ್ನ ಮುತ್ತಿನಂತ ಮಾತಿಗೆ ಮೂಕನಾಗಿರುವ ನನ್ನನ್ನೊಮ್ಮೆ ಮಾತನಾಡಿಸೆ,
ಇಂತಿ ನಿನ್ನ ಪ್ರೀತಿಯ...
ಅನಾಮಿಕ.......