ಚೆಲುವ ಚಂದ್ರಿಕೆ
ಕನಸಿಗೆಲ್ಲ ನೀನೆ ಮಾಲಿಕೆ
ನಗುವ ನಿನ್ನ ನವಿರು ಅಧರಕೆ
ದೃಷ್ಟಿಬೊಟ್ಟು ಬೇಕಿದೆ ಅದರ ಚೆಂದಕೆ
ಮರೆತೆನು ನಾನು ನನ್ನನೆ ಆ ಅಂದಕೆ
ಮಿನುಗುವ ನಿನ್ನ ಕಣ್ಗಳ ಕಡಲಲಿ
ಬಂಧಿಯಾಗಿರುವೆನು ಪ್ರೀತಿಯ ಅಲೆಯಲಿ
ಪ್ರೀತಿ ತುಂಬಿದ ಈ ಕಡಲ ಒಡಲಲಿ
ಸೇರಿ ಹೋಗಿರುವೆ ನಾನಾದ ನಿನ್ನ ಭಾವದಲಿ
ಕಳೆದೋಗಲೆ ನಾನು ನಿನ್ನದೆ ಕನಸಲಿ
ಕಂಡಾಗ ಹಾರುವ ನಿನ್ನ ಮುಂಗುರುಳ
ತಿಳಿಯದೆ ಸೆಳೆದಿದೆ ಅತ್ತ ನನ್ನ ಬೆರಳ
ನೀ ನೋಡತಿರಲು ನನ್ನ ಕಣ್ಣುಗಳ
ಆ ಕ್ಷಣವಲ್ಲ ಅಷ್ಟೊಂದು ಸರಳ
ಅರಿವಿರದೆ ಆಗಿ ಹೋಗುವೆನು ನಾ ಮರುಳ
ತುಸು ನುಡಿವಾಗ ನೀನು
ಕೊಂಚ ಮೌನಿಯಾಗಿ ಬಿಡಲೇನು
ನಿನ್ನ ಕಾಡಿಸಿ ಕೆಣಕಿ ನೋಡಲೇನು
ಮುದ್ದಿಸಿ ಕೋಪವ ಮುರಿಯಲೇನು
ಆ ಮುದ್ದು ನಗುವಿಗೆ ಕಾಯುವ ಪ್ರೇಮಿ ನಾನು
ಇಬ್ಬರ ಕಿರುಬೆರಳ ಜೋಡಿಸಿ
ನಡೆಯುವಾಸೆ ಹೆಜ್ಜೆಗಳ ಕೂಡಿಸಿ
ಕಾಯುವೆನು ನಿನ್ನ ಎಂದಿಗೂ ನನ್ನೆದೆಗೊರಗಿಸಿ
ಬಾಳ ತುಂಬಾ ಸವಿಜೇನ ಸೇರಿಸಿ
ಎಂದಿಗೂ ಜೊತೆಯಾಗಿರುವೆನೆ ನನ್ನ ಪ್ರೇಯಸಿ
ಮಾಡುವಾಸೆ ನೀ ಮೆಚ್ಚುವಂತ ಪ್ರೇಮ ನಿವೇದನೆ
ನಿನಗಾಗಿ ನನ್ನ ಈ ಹೊಸ ಶೋಧನೆ
ನೀ ಮೆಚ್ಚಿದರೆ ಪ್ರೀತಿಯಲಿ ನನ್ನದೊಂದು ಸಾಧನೆ
ಮೆಚ್ಚದಿದ್ದರೆ ಪಡಬೇಕೆ ವೇದನೆ?
ನನ್ನೆದೆಗೆಂದಿಗೂ ನೀನೆ ಅಲ್ಲವೆ ಮನದನ್ನೆ.
ಕಪ್ಪು ಹೊದ್ದಂತೆ ಹರಡಿದ ತಲೆ ಕೂದಲ
ಮೋಡ ರಾಶಿಯನ್ನು ಬಾಚಿ
ನೀಳ ಜಡೆಯನು ಹೆಣೆದು
ತುದಿಗೆ ರಬ್ಬರು ಬಿಗಿದು,
ಹಚ್ಚಿರುವೆಯೇನೋ ಕಣ್ಗಪ್ಪು
ಕೊಂಚವೇ ತೀಡಿ ಹುಬ್ಬು.
ಮಾತಿನ ಮಲ್ಲಿಗೆ
ಕಿರು ಆಭರಣಗಳ ಪೋಷಾಕು
ಕಿವಿಯಲಿ ಅಲುಗಾಡುವ ಲೋಲಾಕು.
ಬಂಗಾರದ ಕತ್ತಿನ ಚಿತ್ತಾರದ ರವಿಕೆ
ಬೆನ್ನು ಬಿಗಿದ ಕಿರು ದಾರಗಳ ಕುಣಿಕೆ
ಕುರಿಂಜಿ ಹೂಗಳ ಜಲಪಾತ
ಸುರಿದಂತೆ ರೇಷ್ಮೆ ಸೀರೆ ನೆರಿಗೆ
ಮುದ್ದಾಗಿ ಬರೆದ ಕವನವೊಂದು
ಸದ್ದಿಲ್ಲದೇ ಕಾಣೆಯಾಗಿದೆ ಇಂದು...
ನಾ ಹುಡುಕಹೊರಟಿರುವೆನು
ಕಾಣದಿಹ ಬೆಳಕಿನಲ್ಲಿ...
ನನ್ನ ಹೃದಯದ ಮಾತುಗಳನು
ಮೌನದಲ್ಲಿ ಬರೆದಿರುವೆನು....
ಕವಿತೆಯಾಗಿ ಓದುವ ಮುನ್ನವೇ..
ಬೀಸುವ ತಂಗಾಳಿಯಂತೆ
ಮರೆಯಾಗಿ ಹೋಗಿದೆ
ನನಗೊಂದು ಮಾತು ಹೇಳದೆ!