ಹುಟ್ಟಿದಾಗಲೇ ಹೇಳಿಬಿಟ್ಟಿದ್ದರು
ಅವಳಿಗೆ ನೀ‘ಹೆಣ್ಣೆಂದು’
ಬೆಳೆಯುವಾಗ ಅನಿಸಿತ್ತು ಅವಳಿಗೆ
ನಾನ್ಯಾಕೆ ಹೆಣ್ಣಾಗಿ ಹುಟ್ಟಿದೆನೆಂದು
ಕೈ ಬಳಪ ಹಿಡಿಯುವ ವಯಸ್ಸಿನಲಿ
ಕೆಲಸಕ್ಕೆ ಹೋಗು ಅಂದಾಗ
ಪುಟ್ಟ ಜೀವವು ಪ್ರಶ್ನಿಸಿತ್ತು ಏಕೆಂದು ?
‘ನೀನು ಹೆಣ್ಣು‘ಹೇಳಿತ್ತು ತಾಯಿ ಜೀವವೊಂದು
ಊಟವೆಲ್ಲವು ಖಾಲಿಯಾಗಿ
ನೀರನ್ನೇ ಕುಡಿದು ಮಲಗು ಅಂದಾಗ
ಪ್ರಶ್ನೆ ಕೇಳಲಿಲ್ಲ ಈ ಬಾರಿ
ಅಭ್ಯಾಸ ಆಗಿಹೋಗಿತ್ತು ತುಂಬಾ ಸಾರಿ...
ಇಷ್ಟವಿಲ್ಲದೆ ಸಣ್ಣ ವಯಸ್ಸಿನಲ್ಲೇ
ಬಲವಂತದಿ ಮದುವೆ ಮಾಡಿಕೊಡಲು
ಅತ್ತಿತ್ತು ಜೀವ ಬಿಟ್ಟು ಹೋಗುವ ನೆಪಕ್ಕೆ ?
ಇಲ್ಲವೇ ಭುವಿಗಿಂತಲೂ ತಾ ಭಾರವೆಂದಿನಿಸಿದಕ್ಕೆ
ಕಣ್ಣಂಚಿನ ನೀರಲ್ಲೇ ಮನೆಬಿಟ್ಟಾಗ
ಅವಳಿಗೇನು ಗೊತ್ತಿತ್ತು
ಇನ್ಮುಂದೆ ಕಣ್ಣೀರೇ ಆಗುವುದು
ತನ್ನ ಬಾಳಸಂಗಾತಿಯೆಂದು .....
ಮಗುವಿರುವಾಗಲೇ ತಾಯಿಯಾಗಿದ್ದಳು
ನಗುತಿರುವ ಮಗು ನೋಡಿ
ಅಳಬೇಕೆ ಇಲ್ಲ ನಗಬೇಕೇ?
ಯಕ್ಷಪ್ರಶ್ನೆಗೆ ಉತ್ತರ ಹುಡುಕಬಲ್ಲಳೇನು
ಗಂಡನೆಂಬುವುನು ಗದರಿದಾಗ
ಕತ್ತಲ ಕೋಣೆಯನು ಸೇರಿದವಳು
ಮತ್ತೆ ಹೊರಬರಲೇ ಇಲ್ಲ
ಅಂಧಕಾರವೇ ಬದುಕು ಮಾಡಿಕೊಂಡಳು
ಸ್ಪಂದಿಸುವುದ ಮರೆತಳು ಭಾವನೆಗಳಿಗೆ
ಜೀವವಿಲ್ಲದ ಗೊಂಬೆಯಂತೆ
ಬದುಕಿರುವುದೇ ಸುಳ್ಳು ಎಂದೆನಿಸಿದಾಗ
ಉಸಿರಾಡಿ ಇನ್ನು ಸತ್ತಿಲ್ಲ ಎಂದು ತಿಳಿದಳು
ಗೋಡೆಗೆ ಜೀವವಿದ್ದರೆ ಅವಳ ಕಂಡು
ಕೇಳಿತ್ತಿತೇನೋ ಒಮ್ಮೆಯಾದರೂ
ನಿನ್ನ ಕಣ್ಣಿರೀಗೆ ಕಾರಣವೇನೆಂದು ?
ಮನುಷ್ಯರಾರು ಆ ಗೊಡವೆಗೆ ಹೋಗಲಿಲ್ಲ
ಕೊನೆವರೆಗೂ ಅವಳಿಗೆ ತಿಳಿಯಲಿಲ್ಲ
ತನ್ನೆದೆನೆಂದು,ತನ್ನವರಾರೆಂದು
ತನ್ನವರೆಲ್ಲವ ತನ್ನೆದೆಂದುಕೊಂಡಳು
ತನ್ನವರೇ ತನಗಾಗದಾಗ ಅತ್ತು ಸುಮ್ಮನಾದಳು
ಕಡಲ ತೀರದಂತೆ ಶಾಂತವಾಗಿ
ಕಾಣುತಿದ್ದ ಅವಳ ಮನಸಲ್ಲಿ
ದುಃಖದ ಅಲೆಗಳು ಹುಯಿಲೆಬ್ಬಿಸಿದ್ದರೂ
ಕಡಲು ಶಾಂತವಾಗಿಯೆ ಇತ್ತು ವಿಧಿಯಿಲ್ಲದೇ
ಹುಟ್ಟಿನಿಂದ ಸಾಯುವರೆಗೂ
ಕಾಡುತಿದ್ದ ಪ್ರಶ್ನೆಯು ಒಂದೇ
ಉತ್ತರ ಸಿಗದ ಪ್ರಶ್ನೆಯು ಒಂದೇ
ತಾನ್ಯಾಕೆ ಹೆಣ್ಣಾಗಿ ಹುಟ್ಟಿದೆನೆಂದು....
ಗಾದೆಪ್ಪ
ಕಡಲೆದೆಯ ಮೇಲೆ ಕುಣಿದಾಡುವ ಅಲೆಗಳು
ಕತ್ತಲ ಸಂಜೆಗೆ ಕಂಬನಿ ಸುರಿಸುವ ನಕ್ಷತ್ರಗಳು
ವಿಶಾಲವಾದ ಸಮುಂದರದ ನೀರಲಿ ಬಿದ್ದು ಒಂದಾಗಿ ಬೆರೆತು ನೆರಳ ಛಾಯೆಯಲ್ಲಿ ಈಜಾಡುತ್ತವೆ, ಹರಿದಾಡುತ್ತವೆ.
ಭಾವ ವಿನಿಮಯವ ಹಂಚಿಕೊಂಡು ಕಡೆಗೊಮ್ಮೆ ಬೀಳ್ಕೊಟ್ಟು ಮರೆಯಾಗುತ್ತವೆ.
ಮತ್ತೆ ಸಂಜೆಗೆ ಮೈ ಬೆಳಗಿನ ಮರುಹುಟ್ಟು ಪಡೆದು ನಕ್ಷತ್ರಗಳು ಇರುವ ತನಕ ಮಿಂಚಿ ಸಂಭ್ರಮಿಸುತ್ತವೆ.
ಧರ್ಮಗಳು ನಮ್ಮನ್ನು ಬಲೆಯಲ್ಲಿಡುವವು
ದೇವರುಗಳು ನಮ್ಮನು ಬಯಲಿಗೆ ತಂದು ನಿಲ್ಲಿಸುವವು
ಜಾತಿಗಳು ನಮ್ಮ ಕನಸ್ಸುಗಳ ಕಿತ್ತುಕೊಳ್ಳುವವು
ಗಡಿ ಗುಡಾರಗಳು ನಮ್ಮನ್ನು ದೂರ ಇಡುವವು
ನಾನು ಕಾಯುತ್ತಿದ್ದೇನೆ ಓಡಿಯಲು ಆ ಗೋಡೆಗಳನ್ನು
ಕೈ ಜೋಡಿಸುವಿರ ನನ್ನೊಟ್ಟಿಗೆ ನೀವು...
ಪ್ರಿಯತಮೆಯ ನೆನಪಿನಲ್ಲಿ
ಕವಿತೆ ಬರೆಯುತ್ತಿಹೆನು ನಾನಿಲ್ಲಿ
ಮುದ್ದಾಗಿ ಬರೆದ ಪದಗಳೆಲ್ಲ
ನಾಚಿಕೆಯಿಂದ ಮರೆಯಲ್ಲಿ ಅಡಗಿರಲು
ಖಾಲಿ ಪುಟದ ಬಿಳಿಯ ಹಾಳೆಯಲ್ಲಿ
ನನ್ನ ನೋಡಿ ನಗುತ್ತಿರಲು
ನಾ ಕಳೆದುಹೋದೆನು
ಕನಸುಗಳ ಮೆರವಣಿಗೆಯಲ್ಲಿ...
ನಾ ಅರಿಯಲಿಲ್ಲವೇಕೆ ಅವಳ
ಅಂತರಾಳದ ತಾತ್ಪರ್ಯಗಳ
ನಾ ಅರಿಯಲಿಲ್ಲವೇಕೆ ಅವಳ
ಹುಚ್ಚು ಪ್ರೀತಿಯ
ನಾ ಅರಿಯಲಿಲ್ಲವೇಕೆ ಅವಳ
ಹೃದಯದ ಗುಣವಂತಿಕೆಯ
ನಾ ಅರಿಯಲಿಲ್ಲವೇಕೆ ಅವಳ
ಕಷ್ಟದ ನೋವುಗಳ
ನಾ ಅರಿಯಲಿಲ್ಲವೇಕೆ ಅವಳ
ಸಮಯ ಪ್ರಜ್ಞೆಯ
ನಾ ಅರಿಯಲಿಲ್ಲವೇಕೆ ಅವಳ
ನಿರ್ಬಂಧನೆಗಳ ಬೆಲೆಯ
ನಾ ಅರಿಯಲಿಲ್ಲವೇಕೆ ಅವಳಿಟ್ಟ
ಜೀವನದ ಸಲಹೆಗಳ
ನಾ ಅರಿತೇನು ಅವಳ ಪ್ರೀತಿ ಗುಣ ಸಲಹೆಗಳ
ಅವಳು ದೂರವಾದ ಈ ಕ್ಷಣದಲ್ಲಿ
ನಾ ಹೇಗೆ ತೋರಿಸಲಿ ಈ ಪಾಪದ ಮುಖವ
ಅವಳು ಅರಿವಳ ನನ್ನ ಆತುರತೆ ನಿರ್ಧಾರಗಳನ್ನ