Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೀಗೆ ಸಾಯಿ ಎಂದರೆ

ಹೀಗೆ ಸಾಯಿ ಎಂದರೆ
ಹೇಗೆ ಸಾಯುವುದು ಹಠಾತ್ತನೆ

ಮರಣಕೆ ಬಂದವರು ನಕ್ಕಾರು
ಮನೆಯ ಕಸ ಗುಡಿಸಿಲ್ಲ
ಅಡುಗೆ ಮನೆ ಕಂಡು ಹೇಸಿಯಾರು
ಪಾತ್ರೆ ತೊಳೆದಾಗಿಲ್ಲ
ಬಟ್ಟೆ ಒಗೆದಿಲ್ಲ ನೆಲ ಒರೆಸಿಲ್ಲ
ಸ್ವಚ್ಛಗೊಳಿಸಿಲ್ಲ ಬಚ್ಚಲು,ಕಕ್ಕಸ್ಸು
ಗಿಡಗಳಿಗೆ ನೀರುಣಿಸಿಲ್ಲ
ಬೆಕ್ಕು ನಾಯಿಗೂ ಊಟ ಹಾಕಿಲ್ಲ
ನಾಳಿನ ತಿಂಡಿಯ ಕುರಿತು ಇನ್ನೂ ಯೋಚಿಸಿಲ್ಲ
ಹೇಗೆ ಸಾಯುವುದು ಹಠಾತ್ತನೆ

ಮನೆಗೆ ಬಂದೊಡನೆ ಪತಿ ಸುತರಿಗೆ
ಮನೆಯೊಡತಿಯ ಹುಡುಕುವ
ಅಭ್ಯಾಸ ಮೊದಲಿಲ್ಲ
ನುಗ್ಗುವರು ಅಡುಗೆಕೋಣೆಗೆ
ಅಡುಗೆ ಇನ್ನೂ ಮುಗಿದಿಲ್ಲ
ಹಸಿದವರ ಮುನಿಸು ನಿಮಗೆ ತಿಳಿದಿಲ್ಲ
ಹೇಗೆ ಸಾಯುವುದು ಹಠಾತ್ತನೆ

ಮಗಳ ಬಾಣಂತನ ಮಾಡಿಲ್ಲ
ಮೊಮ್ಮಗುವ ಬೆಳೆಸಿ ಕೊಟ್ಟಿಲ್ಲ
ಮಗನ ಸಿಇಟಿ ಇನ್ನೂ ಮುಗಿದಿಲ್ಲ
ಗಂಡನನು ರೊಟೀನ್ ಚೆಕಪ್ಪಿಗೆ
ಕರೆದೊಯ್ಯುವ ದಿನಾಂಕ ಸನಿಹವಿಲ್ಲ
ಹೇಗೆ ಸಾಯುವುದು ಹಠಾತ್ತನೆ

ಗೃಹಿಣಿಯ ಅಗತ್ಯ
ಇನ್ನೂ ಮುಗಿದಂತಿಲ್ಲ
ಈಗೀಗ ಮನೆಗೆಲಸಕೆ
ಜನ ಸಿಗುವುದೂ ಇಲ್ಲ
ವಯಸ್ಸಾದ ಪತಿ ಮರು
ಮದುವೆಯಾಗುವರೋ ತಿಳಿದಿಲ್ಲ
ಹೇಗೆ ಸಾಯುವುದು ಹಠಾತ್ತನೆ
- ಕಾದಂಬಿನಿ

- ಕಾದಂಬಿನಿ

10 Oct 2018, 07:24 am

ನೀ ನನಗಿಲ್ಲದಿದ್ದರ,,!

ಏನು ಅರಿಯದ
ಏನು ತಿಳಿಯದ
ಏನು ಮಾತಾಡದ
ಮುಗ್ಧ ಪ್ರೀತಿ ನಿಂದು.
ಏನು ಕಾಣದ
ಏನನ್ನು ಹುಡುಕದ
ಏನಾದರೇನು ಅದು
ಮುದ ನೀಡೋ ನೋಟ ನಿಂದು.
ಎನ್ನೊಡನೆ ಕಾಡದ
ಏನಿದ್ದರೂ ಕೇಳದ
ಏನೂ ವಿಚಾರಿಸದ
ಮನ ಮಲೆನಾಡು ನಿಂದು.
ಎನಗೊಂದು ಲಿಂಗದ
ಮನ ನಿನಗೆ ಚಂದ
ಏನಿತ್ತರೇನು ಸದಾ
ಮನೆ ಅರಸಿ ನೀನಿನ್ನು ಮುಂದ.
ಏನನ್ನು ಮರೆಯದ
ಏನನ್ನು ಮೆರೆಸದ
ಏನಿದ್ದರೇನು ಸುಖ ? ನೀ
ನನಗಿಲ್ಲದಿದ್ದರ ಎಂಬ ಚಿಂತೆಯೊಂದು ನಿಂದು.

- vasu

09 Oct 2018, 03:43 pm

ಮೊಗ್ಗು ಬಿರಿದು ಹೂವಾಯ್ತು

ಪುಟ್ಟ ಬೊಚ್ಚು ಬಾಯಿ
ಎಳಸು ತುಟಿಯ ಲಾಯಿ
ಮುಂದೆರೆಡು ಹಲ್ಲು
ಬಾಯಿ ತುಂಬ ಜೊಲ್ಲು
ಬಾಯ್ದೆರೆದು ನೀ ನಕ್ಕರೆ
ಮಲ್ಲಿಗೆ ಮೊಗ್ಗೂ ಬಿರಿದು ಹೂವಾಯ್ತು

ಚೆಂಡನು ಅನುಮಾನಿಸುವ ಗುಂಡು ಮುಖ
ಪುಡಿ ಕೂದಲಿಗೆ ತಂಗಾಳಿ ಸಖ
ಕಮಲದ ಎಸಳ ನಯನ
ಕಪ್ಪೆಚಿಪ್ಪಿನಂತ ಮೂಗಿನ ತನನ
ನೋಡಿ ಚಂದಿರ ಮುದ್ದುಗರೆಯಲು
ಕಣ್ಣ ಹೊಳಪಲೆ ಅವನ ಕಾಂತಿ ಸೇರಾಯ್ತು

ತಿಕ್ಕಿ ತೀಡಿದ ಎಳಸು ಹುಬ್ಬು
ನೋಡಲು‌‌ ಕೊಂಚ ಮಬ್ಬು
ಎರಡು ಕಾಮನಬಿಲ್ಲ‌ ನಡುವೆ ಗುಂಡಗಿನ ಕಪ್ಪು
ನೋಡುವವರು ‌ನಿನ್ನ ಕಂಡು ಬೆಪ್ಪು
ದೃಷ್ಟಿ ತಾಗದಂತಿಟ್ಟ ಬೊಟ್ಟೂ ದೃಷ್ಟಿಸಿ
ನಿನ್ನಂದ ಕಂಡು ದೃಷ್ಟಿ ತಾಗುವಂತಾಯ್ತು

ಪುಟ್ಟ ಪುಟ್ಟ ಮುದ್ದು ಕೈಕಾಲು
ನೀ‌ ಸೋಕಿ ತೆರೆಯಿತು ಸಗ್ಗದ ಬಾಗಿಲು
ಕೇಕೆ ಹಾಕಿ ಚಪ್ಪಾಳೆ ತಟ್ಟಿ ಕುಣಿದು ಕರೆದರೆ
ಬಾಗಿ‌ ಆಗಲೇ ಬೇಕು ನಿನಗೆ ಕುದುರೆ
ಚಿನ್ನಾಟದ ಚೆಲುವಿನಾಟಕೆ‌ ಮುದ್ದಿಗೂ‌
ಮತ್ಸರ ಬಂದು ಮುಖ ತಿರುವಿ ನಿಂತಾಯ್ತು

- ಶ್ರೀಕಾವ್ಯ

09 Oct 2018, 02:53 pm

ನನ್ನ ನಿಟ್ಟುಸಿರಿಗೆ..

ನನ್ನ ನಿಟ್ಟುಸಿರಿಗೆ
ನನ್ನೆದೆಯ ಗುಟ್ಟು ಗೊತ್ತು
ಭಾರವಾದ ಅದನು ಹೊತ್ತು
ಹೊರನಡೆಯುವುದು ಗೊತ್ತು
ಪ್ರಿಯಾ..
ನಿನ್ನ ವಿಳಾಸವಷ್ಟೇ ಅದಕೆ ತಿಳಿಯದು
***
ನಾನು ಹೊಸದನ್ನೇನೋ ಹೇಳುವೆನೆಂದು
ಕಾದೂ ಕಾದೂ ನಿರಾಶನಾದೆಯಾ ಪ್ರಿಯಾ
ನಾನು ಬಂದಿರುವುದು
ಅವರು ಈಗಾಗಲೇ ಹೇಳಿಹೋಗಿರುವುದನು
ನನ್ನ ಮಾತುಗಳಲಿ ಪುನರಾವರ್ತಿಸಲು ಎಂದು
***
ನೋಡಿದೆಯಾ..
ನಿನ್ನ ಮಾತುಗನ್ನಡಿಯಲಿ
ನೀನು ತೋರಿಸಿದ ಹಾಗೆ
ನಾನು ಕಾಣುತ್ತೇನೆ.
***
ಹತ್ತಿಗೆ ಹತ್ತಿದ ಬೆಂಕಿ
ಹಬ್ಬಿದ್ದೇ ತಿಳಿಯುವುದಿಲ್ಲ
ನಿನ್ನ ಬುಡ ಸುಡತೊಡಗಿದ ಮೇಲೆ
ಅದೆಲ್ಲವೂ ನಿನಗೂ ತಿಳಿಯದೇ ಇರುವುದೂ ಇಲ್ಲ.

- ಕಾದಂಬಿನಿ

08 Oct 2018, 10:31 am

ಪುಟ್ಟ ಕೂಸು

ಪುಟ್ಟ ಕೂಸೊಂದು ಮಡಿಲಲ್ಲಿ ಇಂದು
ಆಡಿ ನಗುತಿಹುದು ವರವಾಗಿ ಬಂದು!!
ಕಂಡ ಕನಸೊಂದು ನಿಜವಾಯಿತು ಇಂದು
ತಾನೇ ಹೊಸತಾಗಿ ಹರುಷವನು ತಂದು!!

ಹಸಿರಾದ ಮರದಲ್ಲಿ ಎಳೆ ಚಿಗುರಿನಂತೆ
ಬಸಿರಾದ ಉದರದಿ ಕೂಸೊಂದು ಬಂತು!!
ಹೊಸತಾಗಿ ಉದಯಿಸಿದ ಆ ಚಂದ್ರಕಾಂತಿ
ಮಡಿಲನ್ನು ಬೆಳಗಿಹುದು ಹುಣ್ಣಿಮೆಯಂತೆ!!

ಹೆಣ್ಣಿನ ಬಯಕೆಯ ಕರುಳಿನ ಈ ಕೊಡುಗೆ
ಸಂಬಂಧ ಹೆಣೆಯಿತು ಬದುಕಿನ ಜೊತೆಗೆ!!
ಚಿನ್ನದ ಚೂರೊಂದು ಬಣ್ಣದಿ ತಾ ಮಿಂದು
ಹೊಳೆದು ಸಾರುತಿದೆ ತಾ ಪುಟ್ಟ ಕೂಸೆಂದು!!

- ಪಿ.ಜಿ.ಜ್ಯೋತಿ

07 Oct 2018, 08:20 pm

ಪ್ರೀತಿ ಅಷ್ಟೇ!!!

ನೀನೇನಾ ಆ ಸಿಹಿಕನಸು ನೀನೇನಾ ಕದ್ದೇ ನನ್ನ ಮುದ್ದು ಮನಸು
ನಿನ್ನ ಪ್ರೀತಿನೇ ನನಗೆ ಬಲು ಸೊಗಸು ನಿನ್ನ ನೋಟದಿ ನನ್ನನ್ನೇ ಮರೆಸು
ಕಣ್ಣಲ್ಲೇ ನನ್ನ ಸೆಳೆದಿರುವೆ ಸುಮ್ಮನೆ ನಾ ಬಲಿಯಾಗಿರುವೆ
ಮಾತಲ್ಲೇ ನನ್ನ ಮೋಹಿಸಿರುವೆ ಆ ಮಾತಲೇ ಮುಳುಗಿರುವೆ


ನಿನ್ನಯ ಸನಿಹದಿ ನೆನೆದು ನನ್ನಲಿ ಬಲು ರೋಚಕ
ಉಸಿರಿನ ಬಿಸಿಯಲಿ ಮನಸಲಿ ತಿಳಿಯದ ನಡುಕ
ಇನ್ನು ಕಾಡ ಬೇಡವೇ ನೀ ನನ್ನ ನಾ ಅಮಾಯಕ
ಕಾದಿಹೆನು ನಿನ್ನ ಸಲಿಗೆಗೆ ನಾನೊಬ್ಬ ಅಸಹಾಯಕ

ತಿಳಿದುಕೋ ನೀ ನನ್ನ ಪ್ರೀತಿ ಆಳ
ತುಂಬಿರುವೆ ನೀ ನನ್ನಲಿ ಬಹಳ


ಎಂದೆದು ನಿನ್ನ ಮೌನದಿ ನೋಡಿ ಕಳೆದಿದೆ ಸಮಯ
ಕೇಳಲು ನಿನ್ನೆಲ್ಲ ಮಾತನು ಕಾಯುವ ನಾನೊಬ್ಬ ಇನಿಯ
ಒಪ್ಪಿಬಿಡು ನೀ ನಿನ್ನ ತಡವರಿಸೋ ಪ್ರೀತಿಯ
ಸಾಯುವೆ ಕೊಟ್ಟುಬಿಡು ಬೆಚ್ಚನೆ ಅಪ್ಪುಗೆಯ

ಕಾಡುದೇ ಹೃದಯದಿ ನಿನ್ನ ಪ್ರೀತಿ
ತಿರುಗಿ ನೋಡೇ ಒಂದೇ ಒಂದು ಸರತಿ....

- Jyothi

07 Oct 2018, 10:29 am

ಆದರ್ಶ ತಾಯಿ

ಬಾಳಿನ ನೌಕೆಯು ಎಡವದೆ ನಡೆಸಲು ತಾಯಿಯೇ ನಾವಿಕಳು
ಮಮತೆಯ ಮಕ್ಕಳ ಒಲವನು ಕಾಣುತ
ದುಗುಡವ ಮರೆಯುವಳು
ತಾಯಿ ಅದರಲೇ ನಲಿಯುವಳು

ಒಲೆಯನು ಊದಿ ಅಡಿಗೆಯ ಮಾಡುತ
ಅಮ್ಮಗೆ ಕೆಲಸಕೆ ಬಿಡುವಿಲ್ಲ
ಈಸವನು ಗುಡಿಸುತ ನೆಲವನು ಒರೆಸುತ
ತಾಯಿಗೆ ಶ್ರಮವದು ಮಿತಿಯಿಲ್ಲ
ದುಡಿಮೆಯ ಅರಿವಿಲ್ಲ

ಅಕ್ಷರ ತಿದ್ದಿಸಿ ಪಾಠವ ಹೇಳಿಸಿ
ಮಾತೆಯೇ ನಮಗೆ ಮೊದಲ ಗುರು
ಪತಿಯು - ಸುತರಿಗೆ ಒಳಿತನು ಬಯಸಲು
ಸಾಟಿ ಕಾಣದ ಹಿತ ಚಿಂತಕರು ಆದರೂ
ತ್ಯಾಗದ ಮಾತೆಯರು

ಆಸೆಯ ಗಂಟು ಬಿಚ್ಚದೆ ಇಟ್ಟು
ಬಡತನಕಿವಳು ಬೆಚ್ಚದೆ ಬೆಳೆದವಳು
ತವರು - ತನ್ನವರಿದ್ದರೂ ಮರೆತು
ಮನೆ- ಮಕ್ಕಳಿಗಾಗಿ ದೇಹವ ತೇದವಳು ಅದರಲೆ
ಧನ್ಯತೆ ಪಡೆದವಳು

ಕುಂಕುಮವ ಹಣೆಗಿಟ್ಟು-ಹಸಿರು ಬಳೆಯತೊಟ್ಟು
ಪತಿಯೇ ಪರದೈವವೆಂದವಳಿವಳು
ಅನ್ನಕ್ಕಿಂತ ಹದವಾಗಿ ಬೆಂದರೂ
ಮೃದು ಮಾತನಾಡುವವಳು ಯನ್ನಮ್ಮನಿರುವಾಗ
"ಆದರ್ಶ ತಾಯಿ" ಎನ್ನಲು ಬೇರಾರು ಬೇಕೆನಗೆ?

ಜಗದಲಿ ನೀನು ಸಾಟಿಯಲ್ಲವೂ ತಾಯಿಗೆ
ಬಣ್ಣಿಸಲೆನಗೆ ಶಕ್ತಿ ಸಾಲದು ದೇವನೆ !

-ಕುಂತೂರು ತ ಸುಬ್ರಮಣ್ಯ
9482119447

- KT Subramanya

07 Oct 2018, 09:07 am

ಕಣ್ಮಣಿಯೇ ಕಣ್ಣಿಗೆ ಕಾಣಿಸಬಾರದೇ???

ಎಷ್ಟು ದಿವಸವ ಕಳೆದೆ ನಿನ್ನಿಂದ
ಎಷ್ಟು ಹರುಷವ ಪಡೆದೆ ನಿನ್ನಿಂದ ॥೧॥

ಜೀವನರಾಗವ ಅನುಭೋಗಿಸಿ ನಿನ್ನ ಸ್ಮೃತಿ ಮಾಡಲು
ಕನಸಿನ ಕನ್ಯೆಯರು ಕರೆದರೂ ನಿನ್ನ ಬೇಡಿದೆ
ಕಾಣದ ಶರೀರಕ್ಕೇ ಬಯೆಕೆಯ ತೋರ್ಪಡಿಸುತ
ನಿನ್ನ ಆಗಮನವೋಂದೆ ಚಟಪಡಿಸುತ
ಎಷ್ಟು ದಿವಸವ ಕಳೆದೆ ನಿನ್ನಿಂದ
ಎಷ್ಟು ಹರುಷವ ಪಡೆದೆ ನಿನ್ನಿಂದ॥೧॥

ಮಳೆಯ ಆಗಮನವ ಕಾಯುತಂತೆ ಮರವು
ಭುವಿಯ ನೀರ ಕುಡಿದು ಹಸಿರಾಯಿತು
ನಾಳೆಗೆ ಕಾಯುತಂತೆ ಇಂದು ನಾಳೆಯಾಯಿತು
ನಿಷ್ಟುರನಾದೆ ದಿನವ ಕಳೆಯುತ ವರುಷವ ದಾಟುತ
ಎಷ್ಟು ದಿವಸವ ಕಳೆದೆ ನಿನ್ನಿಂದ
ಎಷ್ಟು ಹರುಷವ ಪಡೆದೆ ನಿನ್ನಿಂದ॥೧॥

ಸಾಕೀನ್ನು ಎಂದೆನಿಸಲು ನೀ ನೆನೆಪಾದೆ
ಅದೇ ಪ್ರಥಮದಿವಸದ ಭರವಸೆ ಮೂಡಿಸಿದೆ
ಪ್ರಕೃತಿಯೆ ಬದಲಾಗಿ ಕಲ್ಲೋಲವಾದರೂ
ನೀ ಅಚಲವಾಗಿ ಕುಳಿತೆ ಕೃತಿಯಾಗಿ
ಈ ಕರ್ಮವೇ ಸಾಗಿಸುತ ನಿನ್ನ ತವಕಿಸುತ
ಎಷ್ಟು ದಿವಸವ ಕಳೆದೆ ನಿನ್ನಿಂದ
ಎಷ್ಟು ಹರುಷವ ಪಡೆದೆ ನಿನ್ನಿಂದ॥೧॥
::::::ಸchi

- ಸಚ್ಚಿದಾನಂದಗುರುಮಠ

06 Oct 2018, 11:58 pm

ಎಲೆ ಮನವೇ..!

ಎಲೆ ಮನವೇ ನೀ
ಏಕೆ ಪರದಾಡುವೆ!
ಒಂದಿಷ್ಟು ದಿನ ಬಾಳಲು
ಪರರನ್ನೇಕೆ ತುಳಿಯುವೆ ?
ಹೆಮ್ಮರವಾಗಿ ಬೆಳೆದ
ವೃಕ್ಷದ ಎಲೆಗಳು
ಉದುರಿದರಲ್ಲವೇ
ಅದರ ಬೆಳವಣಿಗೆ.
ಹುಟ್ಟಿರುವ ರವಿ
ಮುಳುಗಿದರಲ್ಲವೇ
ತೆಂಗದಿರನ ಆಗಮನ
ಮರುದಿನ ಮತ್ತೆ ಚೇತನ.
ಹುಚ್ಚನಾಗಿ ಬದುಕದಿರು
ಅಚ್ಚನ್ನೊಂದ ಅಳಿಸದಿರು
ಮಚ್ಚಿನೊಂದಿಗೆ ಆಡುವ
ನೀಚ ಬುದ್ದಿಯ ಬೆಳೆಸದಿರು
ಹುಲಿಯೆಂದು ಭಾವಿಸಿದರೆ
ಕೊನೆಗೆ ಹುಲ್ಲು ತಿನ್ನುವೆ
ಕಲಿಯುಗದ ಕೊನೆಯಲಿ
ನಿನಗೆ ನೀನೆ ಬಲಿಯಾಗುವೆ.!

- vasu

06 Oct 2018, 10:33 pm

ನೆನಪಿನ ಹೃದಯ

ಸಮುದ್ರ ದಡದಲ್ಲಿ ಕುಳಿತು ಅಲೆಗಳನ್ನು ನೋಡುತ್ತಾ
ನಮ್ಮಿಂದ ದೂರವಾದ ಹೃದಯಗಳು
ಮತ್ತೆ ಮತ್ತೆ ಸಮುದ್ರದ ಅಲೆಗಳಂತೆ
ಎದೆಯ ಬಾಗಿಲಿಗೆ ಬಂದು ಹೃದಯವನ್ನು
ತಟ್ಟುತಲೇ ಇರುತ್ತವೇ....

- Prakash Angadi

06 Oct 2018, 01:29 pm