ಹಿರೇ ಕೊಡುಗೆಯಲ್ಲಿ ನವೋದಯದ ಧ್ರುವತಾರೆಯ ಜನನ,
ತುಂಗೆಯ ಮಡಿಲಲ್ಲಿ ಕಿಂದರ ಜೋಗಿಗಳ ಜೊತೆ ಪ್ರಕೃತಿಯ ಆಲಿಂಗನ.
ಕುಪ್ಪಳ್ಳಿಯ ಪುಟ್ಟಪ್ಪ ತೀರ್ಥಹಳ್ಳಿಯಲ್ಲಿ ಮುಗಿಸಿದರು ಮಾಧ್ಯಮಿಕ ಶಿಕ್ಷಣ,
ಅವರ ಉನ್ನತ ವ್ಯಾಸಂಗಕ್ಕೆ ನೆಲೆಯಾಯಿತು ಮೈಸೂರು ಪಟ್ಟಣ.
ಆರಂಭಿಸಿದರು ಕುವೆಂಪು ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ,
ಕೊಳಲ ನಾದದಿ ನವಿಲಂತೆ ನರ್ತಿಸುತ್ತಿವೆ ಪುಟ್ಟಪ್ಪನವರ ಪ್ರೇಮ ಕಾವ್ಯಗಳ ಸೃಜನೆ.
ಮನುಜ ಮತ, ವಿಶ್ವ ಪಥ, ಸರ್ವೋದಯ, ಸಮನ್ವಯದ ಬದುಕಿಗೆ ಬುನಾದಿಯಾಗಿರುವ ಕವಿಯ ಪಂಚಮಂತ್ರ,
ನೆನಪಿಸಲಿ ನಮಗೆ ನಾಡ ನುಡಿಗೆ ಶ್ರಮಿಸುವ ಕರ್ತವ್ಯದ ಪಾತ್ರ.
ಕರುನಾಡ ಕುವರನ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಲಭಿಸಿತು ಜ್ಞಾನಪೀಠ ಪ್ರಶಸ್ತಿ,
ರಾಷ್ಟ್ರಕವಿಯ ಮುಡಿಯೇರಿವೆ ಪಂಪ, ಡಾಕ್ಟರೆಟ್, ಕರ್ನಾಟಕ ರತ್ನ, ಪದ್ಮ ವಿಭೂಷಣ ದಂತಹ ಪುರಸ್ಕಾರಗಳು ತಿಳಿಸುತ್ತಿವೆ ಅವರ ಸಾಹಿತ್ಯ ಲೋಕದ ಸಾಧನೆಯ ಉನ್ನತಿ.
ನೆನಪಿನ ದೋಣಿಯಲ್ಲಿ ಜಗವೇ ಪಯಣಿಸುತ್ತಿದೆ ವಿಶ್ವಮಾನವನ ಸಾಲುಗಳ ನೆನೆಯುತ,
ಉದಯ ರವಿಗೆ ಜನುಮದಿನಕ್ಕೆ ಶುಭ ಕೋರುವೆ ನನ್ನ ಪುಟ್ಟ ಕವನವ ಅರ್ಪಿಸುತಾ.
ಬ್ರಹ್ಮ ಬರೆದ ಹಣೆಬರಹ ಸರಿಯಿಲ್ಲವೆಂದು ತಿಳಿದು..!
ಹೊರಟೆ ಹೊಸದಾಗಿ ಬರೆಯುವೆನೆಂದು ಲೇಖನಿಯಾ ಹಿಡಿದು..
ತಿದ್ದಲೋ ಅಥವಾ ಅಳಿಸಿ ಹೊಸದಾಗಿ ಬರೆಯಲೋ ಎಂಬ ಅರಿವೇ ಇಲ್ಲದೇ...
ದೇವರನ್ನೇ ಕೇಳಿದೆ , ಹೇಗೆ ಬರೆಯಲಿ ಏನು ಮಾಡಲಿ ಎಂದು..!
ದೇವರು ಹೇಳಿದ...
ಹುಚ್ಚಪ್ಪಾ !
ಬ್ರಹ್ಮ ಬರೆದ ಹಾಳೆಯಲಿ ಅಂತ್ಯವೇ ಇಲ್ಲ..! ಬರೆದದ್ದು ಅಳಿಸೋಕೆ ಅವನಿಗೇ ಆಗಲ್ಲ..!
ಕಾರಣ
ಅವನ ಹಣೆಬರಹ ಅವನಿಗೇ ತಿಳಿದಿರಲಿಲ್ಲ..!
ಬದುಕು ನೀನೆಂದುಕೊಂಡ ಹಾಗೇ ಇರುವುದಿಲ್ಲ..
ಇಚ್ಚಿಸಿದ್ದು ಇಲ್ಲ, ಹಚ್ಚಿಕೊಂಡಿದ್ದು ಇಲ್ಲ, ಬಯಸಿದ್ದು ಮೊದಲೇ ಇಲ್ಲ..!
ಬದುಕು ಬವಣೆ, ಬದುಕು ಜೀವನದಾ ಹೊಣೆ, ಬದುಕು ಬರಹವಿಲ್ಲದಾ ಖಾಲಿಯಾ ಹಣೆ..!
ಆದರೂ
ನೀನು ಬದುಕು, ಬದುಕಲು ಬದುಕು, ಬಯಸಿದ ಬದುಕು ಬಳಲುವವರೆಗೂ ಬದುಕು, ಜವರಾಯ ಕರೆವವರೆಗೂ ಬಂದಿದ್ದ ಎದುರಿಸಿ ಬದುಕು..!
ಹಾಕಬೇಡ ಹಳೆಯ ಘಟನೆಗಳ ಮೆಲುಕು..!
ಮುಂದೆ ಇದೆ ನವನವೀನ ಬದುಕಿನ ಬೆಳಕು..!
ಅದಕ್ಕಾದರೂ ನೀನು ಆನಂದದೀ ಬದುಕು, ಬದುಕು ಬದುಕು..!!!!
ಮನದಿ ದುಗುಡ ಬಡೆ,
ಯಾರಿಲ್ಲ ನಿನ್ನ ಕಡೆ,
ಕಾಣುವರು ನಿನ್ನ ಕಡೆಗಿಂತ ಕಡೆ,
ಇನ್ನೂ ಕಾದು ನೋಡಬೇಕೆ
ನಿನ್ನವರೆನ್ನುವವರ ನಡೆ.
ಸಾಕು ಮಾಡು ಮನವೇ
ಎಲ್ಲ ನಮ್ಮವರೆನ್ನುವ
ನಿನ್ನ ಈ ಹುಚ್ಚು ನಡೆ...
ತರವಲ್ಲ ಓ ಮನವೇ ಬಹು ನಿರೀಕ್ಷೆ,
ಇರಬಹುದು ನಿನಗೆ ಇದು ಪರೀಕ್ಷೆ,
ನಿನ್ನಂತೆ ನೀನಿರಿವಾಗ ಏಕೆ ಆಪೇಕ್ಷೆ...
ಇರುತ್ತಿದ್ದೆ ನಿನ್ನಂತೆ ನೀ,
ಇರುತೀಯ ನಿನ್ನಂತೆ ನೀ,
ಇದ್ದ ಇರುವ ಅಂತರದಿ ನಡೆವ
ಅಂತರಂಗದ ಕದನವ ಜಯಿಸಿ ಮುನ್ನಡೆ ಮನವೆ,
ನಿನಗಿದೆ ಅಂತರಂಗದ ನಂತರದ ಪರಮಾತ್ಮನ ಒಲವೆ...
ಸಾಗಬೇಕಿದೆ ಬಾಳು
ಇನ್ನು ಸಾಕು ಮಾಡು ಈ ಗೋಳು...
ನಿನ್ನವರೆಂಬರು ನಿನ್ನವರೇ ಆಗಿರ್ದಡೇನು, ಇರದಿರ್ದಡೇನು...
ಸಾಗು ನೀ ಮುಂದೆ, ಬಹುದು ಅದು ಬರಲಿ,
ಆತ್ಮನ ಆತ್ಮ ಪರಮಾತ್ಮನ ದಯೆಯೊಂದಿರಲಿ...
ಯಾರು ಏನೆಂದರೇನು,
ಇರಲು ನಿನ್ನೊಳು ನೀನು,
ಬದುಕು ಸವಿ ಜೇನು...
ನಿನ್ನೊಳು ನೀನಿರು ಮನವೇ,
ನಿನ್ನೊಳು ನೀನಿರು...
---- tippu ----